ಆಗುಂಬೆ ಘಾಟಿಗೆ ಟನಲ್ ನಿರ್ಮಾಣಕ್ಕೆ ಡಿಪಿಆರ್: ಪರಿಸರವಾದಿಗಳ ವಿರೋಧ
ಆಗುಂಬೆ ಘಾಟ್ಗೆ ಟನಲ್ ನಿರ್ಮಿಸುವುದಕ್ಕಾಗಿ ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕಿರಣ್ ಕುಮಾರ್ ಎಸ್ ಈ ಅವರ ವರದಿ ಇಲ್ಲಿದೆ.
ಶಿವಮೊಗ್ಗ: ಪಶ್ಚಿಮ ಘಟ್ಟದ ನೀರಿನ ತೊಟ್ಟಿಲು ಎಂದರೆ ಅದು ಶಿವಮೊಗ್ಗದ ಆಗುಂಬೆ ಬೆಟ್ಟ. ಇದು ಕರಾವಳಿ ಮತ್ತು ಮಲೆನಾಡನ್ನು ಸಂಪರ್ಕಿಸುವ ಕೊಂಡಿಯಾಗಿದೆ. ಇಂತಹ ಪರಿಸರ ಸೂಕ್ಷ್ಮ ಆಗುಂಬೆ ಗುಡ್ಡದಲ್ಲಿ ಸುಗಮ ಸಂಚಾರ ಕಲ್ಪಿಸಲು ಕೇಂದ್ರ ಸರ್ಕಾರ ಇಲ್ಲಿ ಟನಲ್ ಮಾಡಲು ನಿರ್ಧರಿಸಿದೆ. ಆದರೆ, ಟನಲ್ ನಿರ್ಮಾಣಕ್ಕೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಮಳೆಗಾಲದಲ್ಲಿ ಸಂಚಾರ್ ಬಂದ್ : ಆಗುಂಬೆ ಘಾಟ್ ಸದ್ಯ ಕರ್ನಾಟಕದ ಚಿಕ್ಕ ಘಾಟ್ಗಳಲ್ಲಿ ಒಂದು. ಇಂತಹ ಆಗುಂಬೆ ಘಾಟ್ನಲ್ಲಿ ಪ್ರತಿ ಮಳೆಗಾಲದಲ್ಲಿ ಧರೆ ಕುಸಿತ, ಮರಗಳು ಬೀಳುವುದರಿಂದಾಗಿ ರಸ್ತೆ ಸಂಚಾರಕ್ಕೆ ತಡೆಯುಂಟಾಗಲಿದೆ. ಆಗುಂಬೆ ಘಾಟ್ ಚಿಕ್ಕ ಘಾಟ್ ಆಗಿರುವುದರ ಜೊತೆ ರಸ್ತೆ ಸಹ ಕಿರಿದಾಗಿದೆ. ಇದರಿಂದಾಗಿ ಪ್ರತಿ ವರ್ಷ ಮಳೆಗಾಲದಲ್ಲಿ ತಿಂಗಳುಗಟ್ಟಲೆ ದೊಡ್ಡ ವಾಹನಗಳಿಗೆ ಇಲ್ಲಿ ಪ್ರವೇಶ ನಿರ್ಬಂಧ ಹೇರಲಾಗುತ್ತದೆ. ಕೆಲವೊಮ್ಮೆ ಸಣ್ಣ ವಾಹನಗಳು ಸಹ ಸಂಚಾರ ಮಾಡಲು ಆಗುವುದಿಲ್ಲ. ಇದಕ್ಕೆ ಪರಿಹಾರಕ್ಕಾಗಿ ಟನಲ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಡಿಪಿಆರ್ ಮಾಡಲು ಸೂಚಿಸಿದೆ.
ಆಗುಂಬೆ ಘಾಟಿಯ ರಸ್ತೆಯು ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾಗಿದೆ. ಬೆಟ್ಟದಲ್ಲಿನ ಕಲ್ಲು ಕೊರೆದು ರಸ್ತೆ ನಿರ್ಮಾಣ ಮಾಡಲಾಗಿದ್ದು, ಮಳೆಗೆ ಭೂಮಿ ಕುಸಿತವಾಗುತ್ತಿರುತ್ತದೆ. ಇದಕ್ಕೆ ಪರಿಹಾರ ಎಂಬಂತೆ ಟನಲ್ಗೆ ಡಿಪಿಆರ್ ಸಿದ್ದ ಮಾಡಲಾಗುತ್ತಿದೆ. ಬೇರೆ ಪ್ರದೇಶಗಳಂತೆ ಆಗುಂಬೆ ಬೆಟ್ಟ ಇಲ್ಲ. ಬದಲಿಗೆ ಆಗುಂಬೆಗೆ ಟನಲ್ ನಿರ್ಮಾಣ ಮಾಡಬೇಕಾದರೆ, ತೀರ್ಥಹಳ್ಳಿ ತಾಲೂಕು ಮೇಗರವಳ್ಳಿಯಿಂದಲೇ ಟನಲ್ ಪ್ರಾರಂಭ ಮಾಡಬೇಕಾಗುತ್ತದೆ. ಅಲ್ಲದೇ, ಶಿವಮೊಗ್ಗದ ಭಾಗ ಎತ್ತರ ಪ್ರದೇಶದಲ್ಲಿದ್ದು, ಉಡುಪಿಯ ಸೋಮೇಶ್ವರ ಭಾಗ ಅತ್ಯಂತ ಕೆಳ ಮಟ್ಟದಲ್ಲಿದೆ. ಹೀಗಾಗಿ, ಇಲ್ಲಿ ಟನಲ್ ಮಾಡುವುದು ಸೂಕ್ತವಲ್ಲ ಎಂಬುದು ಪರಿಸರವಾದಿಗಳ ವಾದವಾಗಿದೆ.
ಈ ಕುರಿತು ಸಂಸದ ರಾಘವೇಂದ್ರ ಅವರು ಮಾತನಾಡಿದ್ದು, 'ಲೋಕಸಭಾ ಚುನಾವಣಾ ಸಂದರ್ಭದಲ್ಲಿ ನೆಹರು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳ ಕಾರ್ಯಕ್ರಮ ಆಗುವಾಗ ಸಚಿವರಾದ ನಿತಿನ್ ಗಡ್ಕರಿ ಅವರು ಟನಲ್ ಕುರಿತು ಘೋಷಣೆ ಮಾಡಿದ್ದರು. ಅಂದಿನಿಂದಲೂ ನಾನು ಫಾಲೋಅಪ್ ಮಾಡ್ತಾ ಇದ್ದೆ. ಡಿಪಿಆರ್ ಮಾಡಿಸಲು ಪ್ರಯತ್ನ ಮಾಡುವಾಗ, ಹಾಲಿ ಆಗುಂಬೆ ಘಾಟಿಯಲ್ಲಿ ಇರುವ ರಸ್ತೆಯನ್ನು ಅಗಲೀಕರಣ ಮಾಡಲು 400 ಕೋಟಿ ರೂ. ಬಿಡುಗಡೆ ಆಯಿತು. ಆಗ ಡಿಪಿಆರ್ ಮಾಡುವುದು ತಪ್ಪಿತು. ಈಗ ಮತ್ತೊಮ್ಮೆ ರಸ್ತೆ ಅಗಲೀಕರಣದ ಜೊತೆಗೆ ಟನಲ್ ಮಾಡಲು ಡಿಪಿಆರ್ ಮಾಡಲು ಕೇಂದ್ರ ಸರ್ಕಾರ 2.5 ಕೋಟಿ ರೂ. ನೀಡಿದೆ. ಅದಕ್ಕೆ ಆರು ತಿಂಗಳು ಕಾಲಾವಕಾಶ ನೀಡಿದೆ. ಅಧಿಕಾರಿಗಳ ಸಭೆ ನಡೆಸಿ, ಡಿಪಿಆರ್ಗೆ ಆರು ತಿಂಗಳು ತೆಗೆದುಕೊಳ್ಳುವುದು ಬೇಡ. ಆದಷ್ಟು ಬೇಗ ಡಿಪಿಆರ್ ನೀಡಲು ಸೂಚಿಸಲಾಗಿದೆ. ಈಗ ಕೇಂದ್ರ ಸರ್ಕಾರಕ್ಕೆ ಎರಡು ಡಿಪಿಆರ್ ಸಲ್ಲಿಕೆ ಮಾಡಲಾಗುತ್ತಿದೆ. ಒಂದು ಟನಲ್ ಹಾಗೂ ಇನ್ನೊಂದು ಇರುವ ರಸ್ತೆಯನ್ನು ದ್ವಿಪಥವನ್ನಾಗಿಸುವ ಡಿಪಿಆರ್ ಸಲ್ಲಿಕೆ ಮಾಡಲಾಗುತ್ತದೆ. ಹಿಂದೆ ತಾಂತ್ರಿಕತೆಯನ್ನು ಬಳಸಿಕೊಂಡು ಸಾಕಷ್ಟು ಟನಲ್ ಮಾಡಲಾಗಿದೆ. ಈಗ ತಾಂತ್ರಿಕತೆ ಇನ್ನೂ ಮುಂದುವರೆದಿದೆ. ಪರಿಸರ ಪ್ರೇಮಿಗಳ ಹೇಳಿಕೆ ಕೇಳುತ್ತಿದ್ದೇನೆ. ಪರಿಸರ ಉಳಿಸಬೇಕು ಎಂಬುದು ಅವರ ಕಾಳಜಿಯಾಗಿದೆ. ಪರಿಸರಕ್ಕೆ ಹಾನಿಯಾಗದಂತೆ ಕಾಮಗಾರಿ ನಡೆಸಲು ನಮ್ಮ ಅಧಿಕಾರಿಗಳು ಕಾರ್ಯಪ್ರವೃತ್ತರಾಗುತ್ತಿದ್ದಾರೆ. ಮೊದಲು ಡಿಪಿಆರ್ ಸಲ್ಲಿಕೆಯಾಗಲಿ, ಮುಂದೆ ನೋಡೋಣ' ಎಂದರು.
ಈ ಕುರಿತು ಪರಿಸರ ಪ್ರೇಮಿಗಳಾದ ಶ್ರೀಪತಿ ಅವರು ಮಾತನಾಡಿ, 'ಆಗುಂಬೆ ಘಾಟಿ ಇಳಿದು ಸೋಮೇಶ್ವರದ ಕಡೆ ಹೋದ್ರೆ ಅಲ್ಲಿ ಸೀತಾನದಿ ಇದೆ. ಅಲ್ಲಿ ಈಗಾಗಲೇ ಬಂಡೆ ಕಲ್ಲುಗಳ ನಡುವೆ ನದಿ ಹರಿಯುತ್ತಿರುತ್ತದೆ. ಟನಲ್ ನಿರ್ಮಾಣದಿಂದ ಅವುಗಳ ಸ್ಥಾನ ಪಲ್ಲಟವಾಗುತ್ತದೆ. ದೊಡ್ಡ ಟನಲ್ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಅಲ್ಲಿ ಗುಡ್ಡ ಬಹಳ ಕೆಳಗೆ ಹೋಗುತ್ತದೆ. ಈಗ ಟನಲ್ ಮಾಡುವುದಾದರೆ ಮೇಗರವಳ್ಳಿಯಿಂದನೇ ಟನಲ್ ಪ್ರಾರಂಭ ಮಾಡಬೇಕಿದೆ. ಹಾಗಾಗಿ, ಸದ್ಯ ಟನಲ್ ಅನ್ನು ಸರ್ಕಾರ ಕೈ ಬಿಟ್ಟಿದೆ. ಈಗ ಟನಲ್ ಮಾಡುವ ಬದಲು ಇರುವ ರಸ್ತೆಯನ್ನು ಅಗಲೀಕರಣ ಮಾಡುವುದು ಎಂದು ಹೊಸ ಯೋಚನೆ ಮಾಡುತ್ತಿದೆ' ಎಂದರು.
'ಪಶ್ಚಿಮಘಟ್ಟ ಅದು ನಮ್ಮ ವಾಟರ್ ಸ್ಟೋರೆಜ್ ಮಾಡುವ ಜಾಗವಾಗಿದೆ. 60 ದಿನ ಬೀಳುವ ಮಳೆಯನ್ನು 300 ದಿನ ಕಾಪಾಡಿಕೊಳ್ಳಬೇಕಾಗಿದೆ. ಅಲ್ಲದೇ, ಹಳ್ಳಗಳಲ್ಲಿ ನೀರು ಹರಿಯುತ್ತದೆ. ಅಂದ್ರೆ ಅದಕ್ಕೆ ಕಾರಣ ಪಶ್ಚಿಮಘಟ್ಟವಾಗಿದೆ. ಬಂಡೆ ಕೊರೆಯುವುದು, ಕಾಡು ನಾಶ ಮಾಡಿದ್ರೆ, ಅದು ಇಲ್ಲಿನ ನೀರಿನ ಸಂಗ್ರಹಕ್ಕ ಧಕ್ಕೆ ಆಗುತ್ತದೆ. ಪಶ್ಚಿಮಘಟ್ಟವನ್ನು ಬಲಿ ಕೊಟ್ಟು ಅಭಿವೃದ್ದಿ ನಡೆಸುವುದು ನಮಗೆ ಬೇಕಾ?' ಎಂದು ಪ್ರಶ್ನಿಸಿದರು.
'ಟನಲ್, ರಸ್ತೆ ಅಗಲೀಕರಣ, ಪಂಪ್ಡ್ ಸ್ಟೋರೆಜ್ ಹಾಗೂ ನದಿ ತಿರುವು ಯೋಜನೆ ಇರಬಹುದು. ಇದರಲ್ಲಿ ನದಿ ತಿರುವಿನಲ್ಲಿ ನೀರು ಹರಿಯುತ್ತದೆಯೇ ಎಂದು ನೋಡಬೇಕಾಗುತ್ತದೆ. ಹೀಗಾಗಿ, ನಾವು ಪಶ್ಚಿಮಘಟ್ಟ ಯೋಜನೆಗಳ ವಿರೋಧಿಗಳು' ಎಂದು ಹೇಳಿದರು.