48 ವಿಮಾನಗಳಲ್ಲಿ ಒಟ್ಟು 10 ವಿಮಾನಗಳು ಭಾರತೀಯ ನಗರಗಳು ಮತ್ತು ಜೆಡ್ಡಾ ನಡುವೆ ಸಂಚರಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.
ನವದೆಹಲಿ: ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೋಮವಾರ ಮಧ್ಯಪ್ರಾಚ್ಯಕ್ಕೆ ಮತ್ತು ಮಧ್ಯಪ್ರಾಚ್ಯದಿಂದ 48 ನಿಗದಿತ ಮತ್ತು ನಿಗದಿಗೊಳಿಸದ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಎರಡು ವಿಮಾನಯಾನ ಸಂಸ್ಥೆಗಳು ಜೆಡ್ಡಾ ಮತ್ತು ಮಸ್ಕತ್‌ಗೆ ತಮ್ಮ ನಿಗದಿತ ಕಾರ್ಯಾಚರಣೆಗಳನ್ನು ನಡೆಸಲಿದ್ದು, ಇದರಲ್ಲಿ ಭಾರತೀಯ ನಗರಗಳು ಮತ್ತು ಜೆಡ್ಡಾ ನಡುವೆ ಒಟ್ಟು 10 ವಿಮಾನಗಳು ಸಂಚರಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.
ಏರ್ ಇಂಡಿಯಾ ದೆಹಲಿ ಮತ್ತು ಮುಂಬೈನಿಂದ ತಲಾ ಒಂದು ರಿಟರ್ನ್ ಸೇವೆ ನಿರ್ವಹಿಸಲಿದ್ದು, ಏರ್ ಇಂಡಿಯಾ ಎಕ್ಸ್ಪ್ರೆಸ್ನಿಂದ ಬೆಂಗಳೂರು, ಕೋಯಿಕ್ಕೋಡ್ ಮತ್ತು ಮಂಗಳೂರಿನಿಂದ ತಲಾ ಒಂದು ವಿಮಾನ ಸಂಚರಿಸಲಿದೆ. ಅಲ್ಲದೇ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಸ್ಕತ್‌ಗೆ ಮತ್ತು ಅಲ್ಲಿಂದ 12 ನಿಗದಿತ ವಿಮಾನಗಳನ್ನು ನಿರ್ವಹಿಸಲಿದ್ದು, ದೆಹಲಿ, ಕಣ್ಣೂರು, ಮುಂಬೈ ಮತ್ತು ತಿರುವನಂತಪುರಂನಿಂದ ತಲಾ ಒಂದು ಸೇವೆ ಮತ್ತು ಕೊಚ್ಚಿಯಿಂದ ಎರಡು ಸೇವೆಗಳನ್ನು ಒದಗಿಸಲಿದೆ ಎಂದು ಏರ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
ದುಬೈನಲ್ಲಿ ವಿಮಾನ ಕಾರ್ಯಾಚರಣೆಯನ್ನು ಮತ್ತಷ್ಟು ನಿರ್ಬಂಧಿಸಲಾಗಿದೆ. ಇದರಿಂದಾಗಿ ಮಾರ್ಚ್ 15 ಮತ್ತು 17 ರ ನಡುವಿನ ಕೆಲವು ನಿಗದಿತ ಸೇವೆಗಳ ಮೇಲೆ ಪರಿಣಾಮ ಬೀರಿದೆ ಎಂದು ಇಂಡಿಗೋ ಸಂಸ್ಥೆಯು ತಿಳಿಸಿದೆ. ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹೆಚ್ಚುತ್ತಿರುವ ಮಧ್ಯೆ ಮಧ್ಯಪ್ರಾಚ್ಯದಲ್ಲಿ ವಾಯುಪ್ರದೇಶ ನಿರ್ಬಂಧಗಳಿಂದಾಗಿ ಹಲವಾರು ವಿಮಾನಯಾನ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ಮೊಟಕುಗೊಳಿಸಿವೆ.
ಇರಾನ್ ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧ ಶುರುವಾದಾಗಿನಿಂದ ಇಂಡಿಗೋ ಮತ್ತು ಏರ್ ಇಂಡಿಯಾ ಸೇರಿದಂತೆ ಭಾರತೀಯ ವಿಮಾನಯಾನ ಸಂಸ್ಥೆಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು .
ಯುಎಇ ಮೇಲೂ ದಾಳಿ ನಡೆಯುತ್ತಿರುವ ಕಾರಣ, ಅಲ್ಲಿಗೆ ತೆರಳುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳು ರದ್ದಾಗಿದ್ದವು. ಏರ್ ಇಂಡಿಯಾ ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ದೆಹಲಿಯಿಂದ ದುಬೈ ರಿಟರ್ನ್ ವಿಮಾನ ಮಾತ್ರ ಹಾರಾಟ ನಡೆಸಲಿದೆ. ಇನ್ನೈದು ದುಬೈಯಿಂದ ಬರುವ ವಿಮಾನಗಳ ಹಾರಾಟ ರದ್ದಾಗಿವೆ ಎಂದು ತಿಳಿಸಿತ್ತು. ಇತ್ತ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕೂಡ ದೆಹಲಿಯಿಂದ ದುಬೈಗೆ ತೆರಳುವ ವಿಮಾನ ಮಾತ್ರ ಕಾರ್ಯಾಚರಣೆ ನಡೆಸಲಿದೆ. ನಿಗದಿಯಾಗಿದ್ದ ದುಬೈಗೆ ಹೋಗುವ 6 ವಿಮಾನಗಳ ಪೈಕಿ ಐದು ರದ್ದಾಗಿವೆ ಎಂದು ತಿಳಿಸಿತ್ತು.
ಶಾರ್ಜಾದಿಂದ ಕೆಲ ವಿಮಾನ ಸೇವೆ: ಅಬುಧಾಬಿಯಿಂದ ಹೊರಡುವ ಐದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ಭಾನುವಾರ ರದ್ದಾಗಿದ್ದವು. ಆದಾಗ್ಯೂ, ದೆಹಲಿ, ಕಣ್ಣೂರು, ಕೊಚ್ಚಿ, ಕೋಝಿಕೋಡ್, ಮುಂಬೈ ಮತ್ತು ತಿರುವನಂತಪುರಕ್ಕೆ ನಿಗದಿಪಡಿಸಲಾದ ವಿಮಾನಗಳನ್ನು ಶಾರ್ಜಾದಿಂದ ಕಾರ್ಯಾಚರಣೆ ನಡೆಸಲಾಗುವುದು ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ತಿಳಿಸಿತ್ತು.