ಉಡುಪಿ: ಅಡುಗೆ ಅನಿಲ ಸಿಲಿಂಡರ್ ಅಭಾವದ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಸೈಬರ್ ವಂಚಕರು ಹೊಸ ರೀತಿಯ ಮೋಸಗಳಿಗೆ ಕೈ ಹಾಕಿರುವ ಘಟನೆಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರು ಮೋಸ ಹೋಗದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಗ್ಯಾಸ್ ಬುಕ್ಕಿಂಗ್ ಅಥವಾ ಗ್ಯಾಸ್ ಸಿಲಿಂಡರ್ ಕೆವೈಸಿ(KYC) ಅಪ್ಡೇಟ್ ಮಾಡುವ ಹೆಸರಿನಲ್ಲಿ ಅಪರಿಚಿತರು ಕರೆ ಮಾಡುವುದು ಅಥವಾ ಲಿಂಕ್‌ಗಳನ್ನು ಕಳುಹಿಸುವ ಮೂಲಕ ವಂಚನೆ ನಡೆಸಲಾಗುತ್ತಿದೆ. ಈ ಲಿಂಕ್‌ಗಳನ್ನು ಕ್ಲಿಕ್ ಮಾಡುವಂತೆ ಮಾಡಿ ಅಥವಾ ಎಪಿಕೆ (APK) ಫೈಲ್ ಡೌನ್‌ಲೋಡ್ ಮಾಡಿಸಿ, ಬ್ಯಾಂಕ್ ಖಾತೆಯ ಮಾಹಿತಿ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇಂತಹ ಮೋಸಕ್ಕೆ ಈಗಾಗಲೇ ಉಡುಪಿ ಜಿಲ್ಲೆಯ ಇಬ್ಬರು ನಾಗರಿಕರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವುದು ಗಮನಕ್ಕೆ ಬಂದಿದೆ. ಸಾರ್ವಜನಿಕರು ಯಾವುದೇ ಅಪರಿಚಿತ ಲಿಂಕ್‌ಗಳನ್ನು ತೆರೆಯದೇ, ಅನುಮಾನಾಸ್ಪದ ಕರೆಗಳು ಅಥವಾ ಸಂದೇಶಗಳನ್ನು ನಿರ್ಲಕ್ಷಿಸುವಂತೆ ಎಸ್‌ಪಿ ಮನವಿ ಮಾಡಿದ್ದಾರೆ.
ಸಾರ್ವಜನಿಕರಿಗೆ ಸಲಹೆಗಳು:
- ಅಪರಿಚಿತ ಲಿಂಕ್‌ಗಳು ಅಥವಾ ಎಪಿಕೆ ಫೈಲ್‌ಗಳನ್ನು ಓಪನ್ ಮಾಡಲೇಬೇಡಿ.
- ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
- ಅಧಿಕೃತ ವೆಬ್‌ಸೈಟ್ ಅಥವಾ ಆ್ಯಪ್‌ಗಳನ್ನೇ ಬಳಸಿ.