ಉಡುಪಿ ಜಿಲ್ಲೆಗೆ ಇನ್ನೆರಡು ಕ್ಷೇತ್ರ? ಜೋರಾಗುತ್ತಿದೆ 2028ರ ಪುನರ್ ವಿಂಗಡಣೆ ಚರ್ಚೆ, ಬ್ರಹ್ಮಾವರ, ಹೆಬ್ರಿ ಎಲ್ಲಿಗೆ ಸೇರ್ಪಡೆ?
ಜನಸಂಖ್ಯೆ ಆಧಾರದ ಮೇಲೆ, ಕ್ಷೇತ್ರ ಪುನರ್‌ವಿಂಗಡನೆ, ನಡೆದು ಉಡುಪಿ ಜಿಲ್ಲಾ ವ್ಯಾಪ್ತಿಗೆ ವಿಧಾನಸಭಾ ಕ್ಷೇತ್ರಗಳು ಹೆಚ್ಚುವರಿಯಾಗಿ ಸಿಗುವ ಸಾಧ್ಯತೆ ಬಗ್ಗೆ ಚರ್ಚಿಸಲಾಗಿದೆ.
- 2026ರಲ್ಲಿ ನಡೆಯುವ ಜನಗಣತಿ ಆಧರಿಸಿ ಮುಂದೆ ನಡೆಯುವ ಕ್ಷೇತ್ರ ಪುನರ್ ವಿಂಗಡಣೆ ಜಿಲ್ಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
- ಉಡುಪಿ, ಕಾಪು, ಕುಂದಾಪುರ, ಬೈಂದೂರು, ಕಾರ್ಕಳ ವಿಧಾನಸಭೆ ಕ್ಷೇತ್ರ ಹೊಂದಿರುವ ಜಿಲ್ಲೆಗೆ ಬ್ರಹ್ಮಾವರ, ಹೆಬ್ರಿ ಅಥವಾ ಪಡುಬಿದ್ರಿ ಹೆಚ್ಚುವರಿಯಾಗಿ ದೊರೆಯಲಿದೆ
- ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಬೈಂದೂರು ಬೇರ್ಪಡುವ ಸಾಧ್ಯತೆ
ಕುಂದಾಪುರ: 2028 ರಲ್ಲಿ ನಡೆಯುವ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯಡಿ ಉಡುಪಿ ಜಿಲ್ಲೆಗೆ ಹೆಚ್ಚುವರಿಯಾಗಿ ಇನ್ನೆರಡು ವಿಧಾನಸಭೆ ಕ್ಷೇತ್ರಗಳು ಒದಗಿಬರಲಿದೆ ಎಂಬ ಚರ್ಚೆ ಬಲವಾಗುತ್ತಿದೆ.
2026ರಲ್ಲಿ ನಡೆಯುವ ಜನಗಣತಿ ಆಧರಿಸಿ ಮುಂದೆ ನಡೆಯುವ ಕ್ಷೇತ್ರ ಪುನರ್ ವಿಂಗಡಣೆ ಜಿಲ್ಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಉಡುಪಿ, ಕಾಪು, ಕುಂದಾಪುರ, ಬೈಂದೂರು, ಕಾರ್ಕಳ ವಿಧಾನಸಭೆ ಕ್ಷೇತ್ರ ಹೊಂದಿರುವ ಜಿಲ್ಲೆಗೆ ಬ್ರಹ್ಮಾವರ, ಹೆಬ್ರಿ ಅಥವಾ ಪಡುಬಿದ್ರಿ ಹೆಚ್ಚುವರಿಯಾಗಿ ದೊರೆಯಲಿದೆ ಎಂಬ ಮಾತು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕ್ಷೇತ್ರಗಳ ಗಡಿ ಪರಿಷ್ಕರಣೆ
2028ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭ ಕ್ಷೇತ್ರಗಳ ಪುನರ್ ರಚನೆಯಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಒಂದೊಮ್ಮೆ ಪುನರ್ ವಿಂಗಡಣೆ ಪ್ರಕ್ರಿಯೆ ನಡೆದಲ್ಲಿ ಕರ್ನಾಟಕವು ತನ್ನ ವಿಧಾನಸಭೆ ಸ್ಥಾನಗಳನ್ನು 298ಕ್ಕೆ ಹೆಚ್ಚಿಸಬಹುದು ಎಂದು ವರದಿಗಳು ಹೇಳುತ್ತಿವೆ. ಕರ್ನಾಟಕದಲ್ಲಿ ಪ್ರಸ್ತುತ 224 ವಿಧಾನಸಭೆ ಕ್ಷೇತ್ರಗಳಿವೆ. ಜನಸಂಖ್ಯೆಯ ಬದಲಾವಣೆ ಆಧಾರದಲ್ಲಿ ಗಡಿ ಮರುರೂಪಿಸುವ ಸೀಮಾ ನಿರ್ಣಯದ ಪ್ರಕ್ರಿಯೆ 2028ರ ವೇಳೆಗೆ ಜಾರಿಗೆ ಬರುವ ನಿರೀಕ್ಷೆಯಿದೆ. ಇದು ಆಡಳಿತ ಮತ್ತು ಪ್ರತಿಪಕ್ಷಗಳು ಅಂಗೀಕರಿಸಿದ ಶಿಫಾರಸುಗಳೊಂದಿಗೆ ಹೊಂದಿಕೆಯಾಗುವ ಸಾಧ್ಯತೆಯಿದೆ.
ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ
2028ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದಲ್ಲಿ ಮುಂದಿನ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವ ನಿರೀಕ್ಷೆಯಿದೆ. ಶೇ.33 ಮೀಸಲಾತಿಯನ್ವಯ 74 ಸ್ಥಾನ ಮಹಿಳೆಯರಿಗೆ ಮೀಸಲಿಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಸಂಘಟನಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಕಾರ್ಯಕರ್ತರಿಗೆ ವಿಶೇಷ ತರಬೇತಿ ನೀಡುತ್ತಿವೆ. 2028ರಲ್ಲಿ ಚುನಾವಣೆ ನಡೆಯಲಿದ್ದರೂ, ಕ್ಷೇತ್ರಗಳ ಗಡಿಗಳು ಮತ್ತು ಅಂತಿಮ ಸ್ಥಾನಗಳ ಸಂಖ್ಯೆ ಅಧಿಕೃತ ಸೀಮಾ ನಿರ್ಣಯ ಆಯೋಗದ ಪ್ರಕಟಣೆಗಳಿಗೆ ಒಳಪಟ್ಟಿರುತ್ತದೆ.
2008ರಲ್ಲಿ ನಡೆಸಲಾದ ಕ್ಷೇತ್ರ ಪುನರ್ ವಿಂಗಡಣೆ ಸಾಮಾನ್ಯವಾಗಿ ಪ್ರತಿ 25 ವರ್ಷಗಳಿಗೊಮ್ಮೆ ನಡೆಯುತ್ತದೆ. ಪ್ರಸ್ತುತ ಜನಸಂಖ್ಯೆಯಲ್ಲಿ ಆಗಿರುವ ಬದಲಾವಣೆ ಹಿನ್ನೆಲೆಯಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೆ ಕೇಂದ್ರ ಚುನಾವಣಾ ಆಯೋಗ ಉತ್ಸುಕತೆ ತೋರಿದೆ. ಕ್ಷೇತ್ರ ಪುನರ್ ವಿಂಗಡಣೆ ಸಮಿತಿಯ ಇತ್ತೀಚಿನ ಶಿಫಾರಸುಗಳನ್ನು ಎನ್‌ಡಿಎ ಮತ್ತು ಪ್ರತಿಪಕ್ಷಗಳು ಸರ್ವಾನುಮತದಿಂದ ಅಂಗೀಕರಿಸಿವೆ. 2026ರಲ್ಲಿ ಜಾತಿ ಜನಗಣತಿಯೊಂದಿಗೆ ಪ್ರಾರಂಭಿಸಿ, ಪರಿಷ್ಕೃತ ಚುನಾವಣಾ ನಕ್ಷೆ 2028ರ ವೇಳೆಗೆ ಜಾರಿಗೆ ಬರುವ ಸಾಧ್ಯತೆಯಿದೆ.
*ಬ್ರಹ್ಮಾವರ ಮತ್ತೆ ಸ್ವತಂತ್ರ ಕ್ಷೇತ್ರವಾಗುವ ಸಾಧ್ಯತೆ
*ಹೆಬ್ರಿ ಹೊಸ ಕ್ಷೇತ್ರವಾಗಿ ರೂಪುಗೊಳ್ಳುವ ಸಾಧ್ಯತೆ
*ಪಡುಬಿದ್ರಿಯೂ ಕ್ಷೇತ್ರ ಸ್ಥಾನ ಪಡೆಯುವ ನಿರೀಕ್ಷೆ
*ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಬೈಂದೂರು ಬೇರ್ಪಡುವ ಸಾಧ್ಯತೆ
ಜನಗಣತಿ ಪ್ರಕ್ರಿಯೆಗೆ ಅನುಮೋದನೆ ಸಿಕ್ಕಿದೆ. 2027ರೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. 2028ರಲ್ಲಿ ಜನಸಂಖ್ಯೆ ಮತ್ತು ಭೌಗೋಳಿಕ ಆಧಾರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಹುತೇಕ ಖಚಿತ. ಬ್ರಹ್ಮಾವರ ಮತ್ತೆ ಕ್ಷೇತ್ರವಾಗಲಿದೆ. ಹೆಬ್ರಿ ಹೊಸ ಕ್ಷೇತ್ರವಾಗಿ ರೂಪುಗೊಳ್ಳಲಿದೆ. ಪಡುಬಿದ್ರಿಯಲ್ಲೂ ಚರ್ಚೆ ಜೋರಾಗಿದೆ ಎಂದಿದ್ದಾರೆ ವಿಕಾಸ್ ಹೆಗ್ಡೆ, ನ್ಯಾಯವಾದಿ, ಕುಂದಾಪುರ