ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ₹10 ಕಡಿತ: ಇಂಧನ ಬೆಲೆ ಏರಿಕೆ ಆತಂಕದ ಮಧ್ಯೆ ಕೇಂದ್ರದ ನಿರ್ಧಾರ
ಇಂಧನ ಬೆಲೆ ಏರಿಕೆಯ ಆತಂಕದ ನಡುವೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 10 ರೂಪಾಯಿ ಕಡಿತಗೊಳಿಸಿದೆ.
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ಬೆಲೆ ಏರಿಕೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಮಧ್ಯೆ, ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಎರಡರ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು 10 ರೂಪಾಯಿ ಇಳಿಸಿದೆ.
ಗುರುವಾರ ತಡರಾತ್ರಿ ಹೊರಡಿಸಲಾದ ಗೆಜೆಟ್ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಲೀಟರ್‌ಗೆ 13 ರೂ.ನಿಂದ 3 ರೂ.ಗೆ ಇಳಿಸಲಾಗಿದೆ. ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂ.ನಿಂದ 0 ರೂ.ಗೆ ಇಳಿಸಲಾಗಿದೆ.
ಇರಾನ್ ಜೊತೆಗಿನ ಯುಎಸ್-ಇಸ್ರೇಲ್ ಸಂಘರ್ಷ ಮತ್ತು ಅದರ ಪರಿಣಾಮವಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ್ದರಿಂದ ಉಂಟಾದ ಜಾಗತಿಕ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎರಡರ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಕೇಂದ್ರ ಕಡಿತಗೊಳಿಸಿದೆ.
ಪೆಟ್ರೋಲ್, ಡೀಸೆಲ್ ಚಿಲ್ಲರೆ ಬೆಲೆಗಳು ಬದಲಿಲ್ಲ: ಅಬಕಾರಿ ಸುಂಕ ಕಡಿತ ನಿರ್ಧಾರ ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ನಷ್ಟ ಎದುರಿಸುತ್ತಿದ್ದ ತೈಲ ಕಂಪನಿಗಳಿಗೆ ರಿಲೀಫ್ ನೀಡುವು ನಿರೀಕ್ಷೆ ಇದೆ. ಜಾಗತಿಕ ಅನಿಶ್ಚಿತತೆಯ ಈ ಸಂದರ್ಭದಲ್ಲಿ ಇಂಧನ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಮತ್ತು ಗ್ರಾಹಕರಿಗೆ ಪರಿಹಾರ ಒದಗಿಸಲು ಇದೊಂದು ಮಹತ್ವದ ಕ್ರಮವೆಂದು ಪರಿಗಣಿಸಲಾಗುತ್ತಿದೆ. ಆದರೆ, ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಗಳಲ್ಲಿ ಸದ್ಯ ಯಾವುದೇ ಬದಲಾವಣೆ ಆಗಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರ ಬದ್ಧತೆಯನ್ನು ಶ್ಲಾಘಿಸಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯ ಪರಿಣಾಮವನ್ನು ನಿಭಾಯಿಸಲು ಕೇಂದ್ರ ಸರ್ಕಾರ ಗ್ರಾಹಕರ ಮೇಲೆ ಸಂಪೂರ್ಣ ಹೊರೆ ಹಾಕುವ ಬದಲು ತೆರಿಗೆ ಕಡಿತಗೊಳಿಸಲು ನಿರ್ಧರಿಸಿದೆ. ಈ ಕ್ರಮದಿಂದ ತೈಲ ಕಂಪನಿಗಳ ನಷ್ಟ ತಗ್ಗಿಸುವುದು ಮತ್ತು ದೇಶೀಯ ಇಂಧನ ಬೆಲೆಗಳನ್ನು ಸ್ಥಿರವಾಗಿಡಲು ನೆರವಾಗುತ್ತದೆ. ಅತ್ಯಂತ ಸಕಾಲಿಕ, ದಿಟ್ಟ ಮತ್ತು ದೂರದೃಷ್ಟಿಯ ನಿರ್ಧಾರಕ್ಕಾಗಿ ನಾನು ಪ್ರಧಾನಿ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಕ್ಸ್ ಪೋಸ್ಟ್‌ನಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರ ಅಬಕಾರಿ ಸುಂಕ ಕಡಿತವು ಗ್ರಾಹಕರಿಗೆ ಬೆಲೆ ಏರಿಕೆಯಿಂದ ರಕ್ಷಣೆ ನೀಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ನಾಗರಿಕರನ್ನು ಪೂರೈಕೆಯ ಏರಿಳಿತಗಳು ಮತ್ತು ಅಗತ್ಯ ವಸ್ತುಗಳ ವೆಚ್ಚಗಳಿಂದ ರಕ್ಷಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಸಾಕಷ್ಟು ದಾಸ್ತಾನಿದೆ, ಭಯ ಬೇಡ- ಕೇಂದ್ರದ ಮನವಿ: ನಿನ್ನೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ದೇಶದ ಪೆಟ್ರೋಲಿಯಂ ಮತ್ತು ಎಲ್‌ಪಿಜಿ ಪೂರೈಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ನಿಯಂತ್ರಣದಲ್ಲಿದೆ. ಎಲ್ಲಿಯೂ ಪೆಟ್ರೋಲ್, ಡೀಸೆಲ್ ಅಥವಾ ಎಲ್‌ಪಿಜಿ ಕೊರತೆ ಇಲ್ಲ. ಸದ್ಯದ ಬೇಡಿಕೆ ಪೂರೈಸಲು ಪೂರೈಕೆ ಸರಪಳಿಗಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಜನರು ಭಯಭೀತರಾಗಬಾರದು ಎಂದು ಮನವಿ ಮಾಡಿತ್ತು.
ದೇಶದ ಎಲ್ಲೆಡೆಯ ಪೆಟ್ರೋಲ್ ಪಂಪ್‌ಗಳಲ್ಲಿ ಸಾಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ದಾಸ್ತಾನಿದೆ. ಎಲ್ಲಾ ಸಂಸ್ಕರಣಾಗಾರಗಳು ನಿರಂತರ ಪೂರೈಕೆಯನ್ನು ಕಾಯ್ದುಕೊಳ್ಳಲು ಹೆಚ್ಚಿನ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತಿವೆ. ಸಾಕಷ್ಟು ಕಚ್ಚಾ ದಾಸ್ತಾನು ಕೂಡಾ ಇದೆ. ಬೇಡಿಕೆ ಪೂರೈಸಲು ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನೂ ಹೆಚ್ಚಿಸಲಾಗುತ್ತಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿತ್ತು.