ಕಾಳಸಂತೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಮಾರಾಟ ಮಾಡುವುದನ್ನು ಗಮನಿಸಿದ್ದೇವೆ. ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಬೆಂಗಳೂರು: ಕಾಳಸಂತೆಯಲ್ಲಿ ಎಲ್‌ಪಿಜಿ ಮಾರಾಟ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಣಿಜ್ಯ ಸಿಲಿಂಡರ್ ಅವ್ಯವಹಾರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಈಗಾಗಲೇ ಡಿಜಿ ನಿರ್ದೇಶನ ಕೊಟ್ಟಿದ್ದಾರೆ. ಬಹಳ ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ. ಕಾಳಸಂತೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಮಾರಾಟ ಮಾಡುತ್ತಿದ್ದರೆ ಕ್ರಮ ವಹಿಸಲಾಗುವುದು. ನಗರ ಪೊಲೀಸ್ ಆಯುಕ್ತರು ತಂಡ ರಚಿಸಿದ್ದಾರೆ ಎಂದರು.
ನಿಗದಿಯಂತೆ ಗೃಹ ಬಳಕೆಯ ಎಲ್‌ಪಿಜಿ ಪೂರೈಕೆಗೆ ಬದ್ಧ-ಸಚಿವ ಮುನಿಯಪ್ಪ: ಗೃಹ ಬಳಕೆಯ ಎಲ್‌ಪಿಜಿ ಪೂರೈಕೆಯಲ್ಲಿ ಸಮಸ್ಯೆ ಇಲ್ಲ. ವಾಣಿಜ್ಯ ಎಲ್‌ಪಿಜಿ ಸರಬರಾಜಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಯೆ ಆಗಿದೆ. ಯಾರೂ ಆತಂಕಪಡುವ ಅಗತ್ಯ ಇಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ವಸಂತನಗರದ ಆಹಾರ ಭವನದಲ್ಲಿ IOC, BPC, HPC, GAIL ನ ಸಂಸ್ಥೆಗಳ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಎಲ್‌ಪಿಜಿ ಸರಬರಾಜು, ಕೊರತೆ, ವಸ್ತುಸ್ಥಿತಿ ಬಗ್ಗೆ ಚರ್ಚೆ ನಡೆಸಲಾಗಿತ್ತು.
ನಂತರ ಮಾತನಾಡಿದ್ದ ಸಚಿವರು, ಇರಾನ್-ಇಸ್ರೇಲ್ ದೇಶಗಳ ಮಧ್ಯೆ ಯುದ್ದ ನಡೆಯುತ್ತಿದ್ದು, ಅರಬ್ ರಾಷ್ಟ್ರಗಳಾದ ಯುಎಸ್ಎ, ಗಲ್ಪ್ , ರಷ್ಯಾದಿಂದ ನಮ್ಮ ದೇಶಕ್ಕೆ ಅನಿಲ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ದದ ಕಾರಣದಿಂದ ಅನಿಲದ ವೆಸೆಲ್ (ಶಿಪ್ಗಳಿಗೆ) ಹಾನಿ ಉಂಟಾದ ಹಿನ್ನೆಲೆಯಲ್ಲಿ ನಮಗೆ ಅನಿಲ ಸಮಸ್ಯೆ ಉಂಟಾಗಿದೆ. ಗ್ರಾಹಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದರು.