ಮಣಿಪಾಲ, ಮಾ.15: ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ಮುಖ್ಯ ರಸ್ತೆ ಕಾಮಗಾರಿಗೆ ಶಾಸಕ ಯಶ್ಪಾಲ್ ಸುವರ್ಣ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಣಿಪಾಲ ಕೈಗಾರಿಕಾ ಪ್ರದೇಶದ ರಸ್ತೆ ಸಂಪೂರ್ಣ ಹದಗೆಟ್ಟು ಈ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಕೈಗಾರಿಕೆಗಳಿಗೆ ಹಾಗೂ ದಿನಂಪ್ರತಿ ಸಂಚರಿಸುವ ಸಾರ್ವಜನಿಕರಿಗೆ ತೀವ್ರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಉಡುಪಿ ನಗರಸಭೆಯ ಮೂಲಕ 40 ಲಕ್ಷ ರೂ. ಅನುದಾನ ಒದಗಿಸಿ, ಸ್ಥಳೀಯ ಕಂಪೆನಿಗಳ ಸಿಎಸ್‌ಆರ್ ಅನುದಾನದ ಮೂಲಕ ಒಟ್ಟು 3 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ ನೆರವೇರಿಸಿ ಚಾಲನೆ ನೀಡಲಾಗಿದೆ ಎಂದರು.
ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷ ಮಟ್ಟಾರು ವಸಂತ ಕಿಣಿ ಮಾತನಾಡಿದರು. ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸದಸ್ಯರಾದ ಕಲ್ಪನಾ ಸುಧಾಮ, ನರಸಿಂಹ ನಾಯಕ್, ಟಿ.ಜಿ.ಹೆಗ್ಡೆ, ಹರೀಶ್ ಶೆಟ್ಟಿ, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಪದಾಧಿಕಾರಿಗಳಾದ ವಿಶ್ವನಾಥ ಭಟ್, ಚಿತ್ರರಂಜನ್ ಭಟ್, - ವಲ್ಲಭ್ ಭಟ್, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಪ್ರಮುಖರಾದ ಕೃಷ್ಣ ಕುಲಾಲ್, ಸದಾನಂದ ಪ್ರಭು, ನಿತಿನ್ ಪೈ, ಪೃಥ್ವಿರಾಜ್ ಹಾಗೂ ವಿವಿಧ ಕಂಪೆನಿಗಳ ಪ್ರಮುಖರು ಉಪಸ್ಥಿತರಿದ್ದರು.