ಹೊಸದಿಲ್ಲಿ, ಮಾ. 17: ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಗತಿಗಳ ಕುರಿತು ಗಂಭೀರ ಆತಂಕ ವ್ಯಕ್ತಪಡಿಸಿರುವ ಅಮೆರಿಕದ ಅಂತರ್‌ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (USCIRF), ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಭಾರತದ ಗುಪ್ತಚರ ವಿಭಾಗ ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ (RAW) ಸೇರಿದಂತೆ ಕೆಲವು ಸಂಸ್ಥೆಗಳ ವಿರುದ್ಧ ನಿರ್ಬಂಧಗಳನ್ನು ಹೇರಲು ಶಿಫಾರಸು ಮಾಡಿದೆ.
ತನ್ನ ಇತ್ತೀಚಿನ ವರದಿಯಲ್ಲಿ USCIRF, ಧಾರ್ಮಿಕ ಸ್ವಾತಂತ್ರ್ಯದ ತೀವ್ರ ಉಲ್ಲಂಘನೆಗಳಲ್ಲಿ ಭಾಗಿಯಾದ ಅಥವಾ ಅವನ್ನು ಬೆಂಬಲಿಸಿದ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ. ಅವರ ಆಸ್ತಿಗಳನ್ನು ಫ್ರೀಝ್ ಮಾಡುವುದು ಹಾಗೂ ಅಮೆರಿಕ ಪ್ರವೇಶವನ್ನು ನಿಷೇಧಿಸುವುದನ್ನು ಶಿಫಾರಸು ಮಾಡಿದೆ.
ಇದಲ್ಲದೆ, ಧಾರ್ಮಿಕ ಸ್ವಾತಂತ್ರ್ಯದ ಗಂಭೀರ ಉಲ್ಲಂಘನೆಗಳು ನಡೆಯುತ್ತಿರುವ ದೇಶಗಳ ಪಟ್ಟಿಗೆ ಭಾರತವನ್ನು ಸೇರಿಸಿ, ಅದನ್ನು 'ವಿಶೇಷ ಕಾಳಜಿಯ ದೇಶ' (CPC) ಎಂದು ಘೋಷಿಸಬೇಕು ಎಂದು USCIRFD ಹೇಳಿದೆ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಸುಧಾರಣೆಯಾದಾಗ ಮಾತ್ರ ಅಮೆರಿಕ ನೆರವು ಮತ್ತು ವ್ಯಾಪಾರ ನೀತಿಗಳನ್ನು ಮಾಡಬೇಕು ಎಂದು ಅದು ಶಿಫಾರಸು ಮಾಡಿದೆ.
2025ರಲ್ಲಿ ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿ ಹದಗೆಟ್ಟಿದೆ ಎಂದು ವರದಿ ಹೇಳಿದೆ. ಧಾರ್ಮಿಕ ಅಲ್ಪ ಸಂಖ್ಯಾತರು ಮತ್ತು ಅವರ ಪೂಜಾ ಸ್ಥಳಗಳನ್ನು ಗುರಿಯಾಗಿಸಿ ಸರಕಾರ ಹೊಸ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಅದು ಆರೋಪಿಸಿದೆ.
ಹಲವಾರು ರಾಜ್ಯಗಳು ಮತಾಂತರ ವಿರೋಧಿ ಕಾನೂನುಗಳನ್ನು ಇನ್ನಷ್ಟು ಕಠಿಣಗೊಳಿಸುತ್ತಿವೆ ಎಂದು ವರದಿ ಹೇಳಿದೆ. ಅಧಿಕಾರಿಗಳು ಜನರನ್ನು ದೊಡ್ಡ ಪ್ರಮಾಣದಲ್ಲಿ ಬಂಧಿಸಿ, ಕೆಲವರನ್ನು ಹೊರಹಾಕುತ್ತಿದ್ದಾರೆ ಎಂಬ ಆರೋಪವೂ ಇದೆ. ಧಾರ್ಮಿಕ ಅಲ್ಪ ಸಂಖ್ಯಾತರ ವಿರುದ್ಧದ ದಾಳಿಗಳೂ ನಡೆಯುತ್ತಿವೆ ಎಂದು ವರದಿ ಉಲ್ಲೇಖಿಸಿದೆ. ಪೆಹೆಲ್ಗಾಮ್ ನಲ್ಲಿ 26 ನಾಗರಿಕರು ಸಾವನ್ನಪ್ಪಿದ ಭಯೋತ್ಪಾದಕ ದಾಳಿಯ ನಂತರ, ದೇಶದಲ್ಲಿ ಮುಸ್ಲಿಮ್ ವಿರೋಧಿ ಭಾವನೆಗಳು ತೀವ್ರಗೊಂಡಿವೆ ಎಂದು ವರದಿ ತಿಳಿಸಿದೆ. ಕರ್ನಾಟಕ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ಕೆಲವು ಘಟನೆಗಳನ್ನು ಉದಾಹರಣೆಯಾಗಿ ನೀಡಲಾಗಿದೆ.
ಉತ್ತರ ಪ್ರದೇಶದಲ್ಲಿ, ಕಾಶ್ಮೀರ ದಾಳಿಗೆ ಸೇಡು ತೀರಿಸುವುದಾಗಿ ಹೇಳಿ ಒಬ್ಬ ವ್ಯಕ್ತಿ ಮುಸ್ಲಿಮ್ ರೆಸ್ಟೋರೆಂಟ್ ಕಾರ್ಮಿಕನನ್ನು ನ್ನು ಗುಂಡಿಕ್ಕಿ ಕೊಂದ ಘಟನೆ ವರದಿ ಉಲ್ಲೇಖಿಸಿದೆ. ಅದೇ ಘಟನೆ ನಂತರ, ಕೆಲ ಧಾರ್ಮಿಕ ಅಲ್ಪ ಸಂಖ್ಯಾತರನ್ನು 'ಅಕ್ರಮ ವಲಸಿಗರು' ಎಂದು ಹೇಳಿ ದೇಶದಿಂದ ಹೊರಹಾಕಲಾಗಿದೆ ಎಂದು ವರದಿ ಹೇಳಿದೆ. ಸುಮಾರು 40 ರೊಹಿಂಗ್ಯಾ ನಿರಾಶ್ರಿತರನ್ನು (ಅವರಲ್ಲಿ 15 ಮಂದಿ ಕ್ರಿಶ್ಚಿಯನ್ನರು) ಭಾರತೀಯ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ವರದಿ ಹೇಳಿದೆ.
ಅವರನ್ನು ಮ್ಯಾನ್ಮಾರ್ ಹತ್ತಿರದ ಸಮುದ್ರಕ್ಕೆ ಕರೆದೊಯ್ಯಲಾಗಿದೆ. ಅಲ್ಲಿ ಜೀವ ರಕ್ಷಕ ಜಾಕೆಟ್ ಹಾಗೂ ನೀರಿಗೆ ಇಳಿಸಿತೀರದ ಕಡೆ ಈಜಲು ಹೇಳಲಾಗಿದೆ ಎಂದು ವರದಿ ಉಲ್ಲೇಖಿಸಿದೆ