ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಮತ್ತು ಕ್ರಾಂತಿಕಾರಿ ಗಾರ್ಡ್‌ನ ಸ್ವಯಂಸೇವಕ ಘಟಕವಾದ ಬಸಿಜ್ ಪಡೆಯ ಮುಖ್ಯಸ್ಥ ಜ.ಘೋಲಮ್ ರೆಜಾ ಸೊಲೈಮಾನಿ ಅವರನ್ನು ಕೊಂದಿದ್ದೇವೆ ಎಂದು ಇಸ್ರೇಲ್ ಘೋಷಿಸಿದೆ.
ನವದೆಹಲಿ: ಕಳೆದ ರಾತ್ರಿ ನಡೆಸಿದ ವಾಯು ದಾಳಿಯಲ್ಲಿ ಇರಾನ್‌ನ ಭದ್ರತಾ ವಿಭಾಗದ ಮುಖ್ಯಸ್ಥ ಅಲಿ ಲಾರಿಜಾನಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಇಂದು (ಮಂಗಳವಾರ) ಪ್ರಕಟಿಸಿದ್ದಾರೆ. ಇದೇ ವೇಳೆ, ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ನ ಘಟಕ ಬಸಿಜ್ ಪಡೆಯ ಮುಖ್ಯಸ್ಥ ಜನರಲ್ ಘೋಲಮ್ ರೆಜಾ ಸೊಲೈಮಾನಿ ಅವರನ್ನೂ ಕೊಂದಿದ್ದೇವೆ ಎಂದು ತಿಳಿಸಿದ್ದಾರೆ.
ಇಬ್ಬರ ಸಾವು ದೃಢಪಡಿಸದ ಇರಾನ್: ಇರಾನ್‌ನ ಸರ್ಕಾರಿ ಮಾಧ್ಯಮ ಈ ಇಬ್ಬರ ಸಾವುಗಳನ್ನು ತಕ್ಷಣಕ್ಕೆ ದೃಢಪಡಿಸಿಲ್ಲ. ಆದರೆ, ಲಾರಿಜಾನಿ ಅವರ ಕಚೇರಿಯಿಂದ ಬಂದ ಸಂದೇಶವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಿದೆ.
ಯಾರು ಲಾರಿಜಾನಿ?: ಲಾರಿಜಾನಿ ಇರಾನ್‌ನ ಪ್ರಸಿದ್ಧ ರಾಜಕೀಯ ಕುಟುಂಬದಿಂದ ಬಂದವರು. ಸಂಸತ್ತಿನ ಮಾಜಿ ಸ್ಪೀಕರ್ ಮತ್ತು ಹಿರಿಯ ನೀತಿ ಸಲಹೆಗಾರರಾಗಿದ್ದರು. ಇವರನ್ನು ಟ್ರಂಪ್ ಆಡಳಿತದೊಂದಿಗೆ ಪರಮಾಣು ಮಾತುಕತೆಗಳಲ್ಲಿ ಖಮೇನಿ ಅವರಿಗೆ ಸಲಹೆ ನೀಡಲು ನೇಮಿಸಲಾಗಿತ್ತು.ಲಾರಿಜಾನಿ ಇರಾನ್‌ನ ಸರ್ವೋಚ್ಛ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿಯಾಗಿಯೂ ಆಗಿದ್ದರು.
ಜನವರಿಯಲ್ಲಿ ಇರಾನ್‌ನಾದ್ಯಂತ ನಡೆದ ಪ್ರತಿಭಟನೆಗಳನ್ನು ಹಿಂಸಾತ್ಮಕವಾಗಿ ನಿಗ್ರಹಿಸಿದ್ದರಿಂದ ಅಮೆರಿಕ, ಲಾರಿಜಾನಿ ವಿರುದ್ಧ ನಿರ್ಬಂಧ ಹೇರಿತ್ತು. ಇವರು ಇರಾನ್‌ನ ಸರ್ವೋಚ್ಚ ನಾಯಕನ ಪರವಾಗಿ ಪ್ರತಿಭಟನೆಗಳಿಗೆ ಪ್ರತಿಕ್ರಿಯೆಗಳನ್ನು ಸಂಘಟಿಸುವ ಜವಾಬ್ದಾರಿ ಹೊಂದಿದ್ದರು ಎಂದು ಹೇಳಿತ್ತು.
ಇರಾನ್‌ನಲ್ಲಿ ನಡೆದ ಪ್ರತಿಭಟನೆಗಳು ಮತ್ತು ನಂತರ ಸರ್ಕಾರ ಕೈಗೊಂಡ ಅತ್ಯಂತ ದಮನಾತ್ಮಕ ಕ್ರಮಗಳಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದರು ಮತ್ತು ಹತ್ತಾರು ಸಾವಿರ ಜನರನ್ನು ಬಂಧಿಸಲಾಗಿತ್ತು. ಫೆ.28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಯಲ್ಲಿ 86 ವರ್ಷದ ದೇಶದ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಸರ್ಕಾರದ ಪ್ರಮುಖರು ಸಾವನ್ನಪ್ಪಿದ್ದರು.