ಇಂದೂ ಕೂಡಾ ರಾಜ್ಯದ ಹಲವೆಡೆ ಬೇಸಿಗೆ ಮಳೆ ಸುರಿಯಿತು. ಈ ಮೂಲಕ ಬಿಸಿಲ ಬೇಗೆಯಿಂದ ತತ್ತರಿಸಿದ ಜನರಿಗೆ ಕೊಂಚ ರಿಲೀಫ್ ಸಿಕ್ಕಂತಾಯಿತು.
ಬೆಂಗಳೂರು: ಬಿಸಿಲ ಬೇಗೆಯಿಂದ ತತ್ತರಿಸಿದ ರಾಜ್ಯದ ಹಲವೆಡೆ ಇಂದೂ ಮಳೆಯ ಸಿಂಚನವಾಗಿದೆ. ಮಂಗಳವಾರದಿಂದ ಆಲಿಕಲ್ಲು ಸಹಿತ ಜೋರು ಮಳೆ ಆಗುತ್ತಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಸಂಜೆಯಾಗುತ್ತಿದ್ದಂತೆ ಹಲವೆಡೆ ಆಲಿಕಲ್ಲು ಸಹಿತ ಮಳೆ ಬಿತ್ತು. ಮೆಜೆಸ್ಟಿಕ್, ಶಾಂತಿನಗರ, ಕಾಡುಗೋಡಿ, ಮಾರ್ಕೆಟ್, ಜಯನಗರ, ಬಸವೇಶ್ವರ ನಗರ, ಶಾಂತಿನಗರ, ರಾಜಾಜಿನಗರ, ವಿಲ್ಸನ್ಗಾರ್ಡನ್ ಹಾಗು ರಿಚ್ಮಂಡ್ಟೌನ್ ಸುತ್ತಮುತ್ತ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯಿತು.
ದಾವಣಗೆರೆ ಜಿಲ್ಲೆಯಲ್ಲಿಯೂ ಮತ್ತೆ ಆಲಿಕಲ್ಲು ಮಳೆಯಾಗಿದೆ. ಒಂದು ಗಂಟೆಗೂ ಅಧಿಕ ಕಾಲ ಸುರಿದ ಮಳೆಯಿಂದ ಕೆಲ ಹಳ್ಳಿಗಳ ರಸ್ತೆಗಳು ಆಲಿಕಲ್ಲಿನಿಂದ ತುಂಬಿದ್ದವು. ದಾವಣಗೆರೆ ತಾಲೂಕಿನ ಗುಡಾಳ್, ಗುಮ್ಮನೂರು, ಭಾವಿಹಾಳ್, ನರಗನಹಳ್ಳಿ, ಚಿನ್ನಸಮುದ್ರ, ಹೆಬ್ಬಾಳು ಸೇರಿದಂತೆ ಹಲವು ಕಡೆ ಆಲಿಕಲ್ಲು ಮಳೆ ಬಿದ್ದಿದೆ. ಮಳೆಯಿಂದ ರೈತಾಪಿ ವರ್ಗಕ್ಕೆ ಸಂತಸ ಮನೆಮಾಡಿದ್ದು, ಆದರೆ ಮಾವು ಬೆಳೆಗಾರರಿಗೆ ಸಂಕಟ ತಂದಿದೆ. ರಾಶಿ ರಾಶಿ ಆಲಿಕಲ್ಲು ಬಿದ್ದಿರುವುದನ್ನು ಕಂಡ ಜನರು ಸಂತಸದಿಂದ ದೃಶ್ಯವನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದಿದ್ದಾರೆ.
ಬಿಸಿಲಿನ ತಾಪದಿಂದ ಬಳಲಿದ್ದ ಸಾಂಸ್ಕೃತಿಕ ನಗರಿಯ ಜನರಿಗೆ ಯುಗಾದಿ ಹಬ್ಬದ ಹಿಂದಿನ ದಿನ ಧಾರಾಕಾರವಾಗಿ ಸುರಿದ ಮಳೆಯು ಕೊಂಚ ತಂಪೆರೆಯಿತು. ಯುಗಾದಿ ಹಬ್ಬಕ್ಕೆ ಹೊಸ ಬಟ್ಟೆ ಹಾಗೂ ಹಬ್ಬದ ಸಾಮಗ್ರಿಗಳ ಖರೀದಿಗೆಂದು ಮಾರುಕಟ್ಟೆಗೆ ಬಂದ ಜನರಿಗೆ ಅಡಚಣೆ ಉಂಟಾಯಿತು. ನಗರದ ದೇವರಾಜ ಮಾರುಕಟ್ಟೆ, ಸಿಟಿ ಬಸ್ ನಿಲ್ದಾಣ, ಅರಮನೆ ಸುತ್ತ ಹಾಗೂ ದೇವರಾಜ ಅರಸು ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ರಸ್ತೆ ಗುಂಡಿಗಳಲ್ಲಿ ನೀರು ತುಂಬಿ, ವಾಹನ ಸವಾರರಿಗೆ ಹಾಗೂ ಮಾರುಕಟ್ಟೆ ಪ್ರದೇಶದಲ್ಲಿ ಯುಗಾದಿಗೆ ಖರೀದಿಗೆ ಬಂದಿದ್ದ ಜನರಿಗೆ ತೊಂದರೆಯಾಯಿತು.
ಧಾರಾಕಾರ ಮಳೆಯಿಂದ ಚಾಮುಂಡಿ ಬೆಟ್ಟದಲ್ಲಿ ಬೇಸಿಗೆಯಿಂದ ಕಾಣಿಸಿಕೊಳ್ಳುತ್ತಿದ್ದ ಕಾಡ್ಗಿಚ್ಚಿನ ಅಪಾಯ ಸ್ವಲ್ಪಮಟ್ಟಿಗೆ ತಪ್ಪಿದೆ ಎನ್ನುತ್ತಾರೆ ಅರಣ್ಯ ಅಧಿಕಾರಿಗಳು. ಚಾಮರಾಜನಗರದಲ್ಲಿಯೂ ಬಿರುಗಾಳಿ ಸಮೇತ ವರುಣಾರ್ಭಟವಿತ್ತು. ಚಾಮರಾಜನಗರ ಪಟ್ಟಣ ಹಾಗೂ ತಾಲೂಕಿನಾದ್ಯಂತ ಬಿರುಗಾಳಿ ಸಮೇತ ಮಳೆ ಸುರಿಯಿತು. ಮಳೆಗೆ ವಾಹನ ಸವಾರರು ರಸ್ತೆ ಕಾಣದೆ ಪರದಾಡಿದರು. ಬಿರುಗಾಳಿಯ ರಭಸಕ್ಕೆ ಕೆಲವೆಡೆ ತೆಂಗಿನ ಗರಿಗಳು ಧರಾಶಾಹಿಯಾದವು. ಅಲ್ಲದೆ, ಹಲವೆಡೆ ಬಾಳೆ ತೋಟಗಳಿಗೂ ತೀವ್ರ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ನಿನ್ನೆ ಸುರಿದ ಆಲಿಕಲ್ಲು ಮಳೆ ರೈತರನ್ನು ಚಿಂತೆಗೀಡು ಮಾಡಿದೆ. ಇಂದು ಮತ್ತೆ ರಣಚಂಡಿ ಮಳೆ ಸುರಿದಿದೆ. ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ವಿವಿಧೆಡೆ ಮಳೆಯಾಗಿದೆ.