ಇಂದಿನಿಂದ IPL ಪಂದ್ಯಾವಳಿ; ಸರ್ಕಾರದ ಷರತ್ತು, ಎಚ್ಚರಿಕೆ ನಿಯಮ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ
ಪಂದ್ಯಾವಳಿ ಆಯೋಜನೆಗೆ ಸರ್ಕಾರ ವಿಧಿಸಿರುವ ಷರತ್ತುಗಳು ಮತ್ತು ಎಚ್ಚರಿಕೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚನೆ ನೀಡಿದ್ದಾರೆ.
ಬೆಂಗಳೂರು: ಇಂದಿನಿಂದ IPL ಪಂದ್ಯಾವಳಿಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ ಅಧಿಕಾರಿಗಳು ಮತ್ತು KSCA ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಸುರಕ್ಷತೆ ಕುರಿತಾಗಿ ಸುದೀರ್ಘ ಸಭೆ ನಡೆಸಿ ಸಲಹೆ, ಸೂಚನೆಗಳನ್ನು ನೀಡಿದರು.
ಕ್ರಿಕೆಟ್ ಪ್ರೇಮಿಗಳ ಸುರಕ್ಷತೆಗೆ ಕ್ರೀಡಾಂಗಣದ ಒಳಗೆ ಮತ್ತು ಕ್ರೀಡಾಂಗಣದ ಸುತ್ತ ರೂಪಿಸಿರುವ ಭದ್ರತಾ ವ್ಯವಸ್ಥೆ, ನಗರದ ಸಂಚಾರ ವ್ಯವಸ್ಥೆಯಲ್ಲಿ ಮಾಡಿಕೊಳ್ಳಲಾಗಿರುವ ಬದಲಾವಣೆಗಳು, ಪಾರ್ಕಿಂಗ್ ವ್ಯವಸ್ಥೆ, ಕ್ರೀಡಾಂಗಣದ ಒಳಗೆ ಕುಡಿಯುವ ನೀರು ಸೇರಿದಂತೆ ಇತರ ಅತ್ಯಾವಶ್ಯಕ ಸಂಗತಿಗಳ ಕುರಿತಾಗಿ ಮಾಹಿತಿ ಪಡೆದುಕೊಂಡರು.
ಮೆಟ್ರೋ ರೈಲಿನ ಮೇಲೆ ಬೀಳುವ ಪ್ರಯಾಣಿಕರ ಸಾಂದ್ರತೆ, ಮೆಟ್ರೋ ಸಂಚರಿಸುವ ವೇಳಾಪಟ್ಟಿ, ಮೆಟ್ರೋ ನಿಲ್ದಾಣಗಳಲ್ಲಿ ಮಾಡಿಕೊಳ್ಳಲಾಗಿರುವ ಹೆಚ್ಚುವರಿ ಭದ್ರತೆ, ಸುರಕ್ಷತೆ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸಣ್ಣ ಅಹಿತಕರ ಘಟನೆಗೂ ಅವಕಾಶ ಆಗದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಹಲವು ಸೂಚನೆಗಳನ್ನು ನೀಡಿದರು.
ಪಂದ್ಯಾವಳಿ ಆಯೋಜನೆಗೆ ಸರ್ಕಾರ ವಿಧಿಸಿರುವ ಷರತ್ತುಗಳು ಮತ್ತು ಎಚ್ಚರಿಕೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಭೆಯಲ್ಲಿ ಸೂಚನೆ ನೀಡಿದರು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಂಸ್ಥೆಗಳು ಹೈ ಅಲರ್ಟ್ ಆಗಿರಬೇಕು. ಆಯಾ ಕ್ಷಣದ ಮಾಹಿತಿಗಳನ್ನು ಮೇಲಿನ ಅಧಿಕಾರಿಗಳಿಗೆ ನಿಯಮಿತವಾಗಿ ವಿನಿಮಯ ಮಾಡಿಕೊಳ್ಳಬೇಕು ಎನ್ನುವ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ KSCA ಸಂಸ್ಥೆಯ ಆಡಳಿತ ಮಂಡಳಿ, ಪದಾಧಿಕಾರಿಗಳು, RCB ಪದಾಧಿಕಾರಿಗಳು, ನಗರ ಪೊಲೀಸ್ ಆಯುಕ್ತರು, GBA ಅಯುಕ್ತರು, ಮೆಟ್ರೋ MD ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಕೆಎಸ್ ಸಿಎ ಪದಾಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಸ್ಟೇಡಿಯಂನಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿ. ಯಾವುದೇ ಸಮಸ್ಯೆ ಆಗಬಾರದು ಎಂದು ಸಲಹೆ ಸೂಚನೆ ನೀಡಿದರು.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯುವ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ರಾಜ್ಯದ ಶಾಸಕರಿಗೆ ತಲಾ ಎರಡು ಟಿಕೆಟ್ ನೀಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಿರ್ಧಾರ ತೆಗೆದುಕೊಂಡಿದೆ.
ಪ್ರತಿ ಶಾಸಕರಿಗೆ ಐಪಿಎಲ್ ಪಂದ್ಯಗಳ ನಾಲ್ಕು ಟಿಕೆಟ್ ನೀಡುವಂತೆ ಸದನದಲ್ಲಿ ಶಾಸಕರು ಒತ್ತಾಯಿಸಿದ್ದರು. ಈ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ನಿನ್ನೆ ಮಧ್ಯಾಹ್ನ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಜೊತೆ ಸಭೆ ನಡೆಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
"ಐಪಿಎಲ್ ಪಂದ್ಯಗಳಿಗೆ ಶಾಸಕರು ತಲಾ ನಾಲ್ಕು ಟಿಕೆಟ್‌ಗಳನ್ನು ನೀಡುವಂತೆ ಕೇಳಿದ್ದರು. ಆದರೆ, ಪಂದ್ಯದ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಆದ್ದರಿಂದ ಶಾಸಕರು, ಸಚಿವರು ಮತ್ತು ಸಂಸದರಿಗೆ ತಲಾ ಎರಡು ಟಿಕೆಟ್‌ಗಳನ್ನು ನಾಳೆಯ ಪಂದ್ಯಕ್ಕೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ." ಎಂದು ಡಿಸಿಎಂ ಶಿವಕುಮಾರ್ ಅವರು ಸಭೆಯ ನಂತರ ಮಾಧ್ಯಮದವರಿಗೆ ತಿಳಿಸಿದರು.